Thursday, June 12, 2014

Karnataka Home Minister in Shimoga

ಹಳೇ ಜೈಲು ಫ್ರೀಡಂ ಪಾರ್ಕ್ ಮಾದರಿ ಅಭಿವೃದ್ಧಿ : ಕೆ.ಜೆ. ಜಾರ್ಜ್
 11-6-2014: ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಹಳೆ ಜೈಲನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಬುಧವಾರ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಸೋಗಾನೆಯಲ್ಲಿ ನಿರ್ಮಿಸಿರುವ ನೂತನ ಕಾರಾಗೃಹ ಪ್ರದೇಶಕ್ಕೆ ಉತ್ತಮ ನಾಗರಿಕ ಸೌಲಭ್ಯ ಕಲ್ಪಿಸಬೇಕಿದೆ. ಈ ವಿಷಯವಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ತ್ವರಿತವಾಗಿ ಜೈಲು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂತೆಯೇ, ಶಿವಮೊಗ್ಗ ಹೃದಯ ಭಾಗದಲ್ಲಿರುವ ಜೈಲು ಪ್ರದೇಶವನ್ನು ಬೆಂಗಳೂರಿನ ಸೆಂಟ್ರಲ್ ಜೈಲ್ ಸ್ಥಳಾಂತರ ನಂತರ ರೂಪಿಸಲಾಗಿರುವ ಬಹುಪಯೋಗಿ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ಹಾಗೂ ಜೈಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು. 
ಅಲ್ಲದೆ, ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ, ಮಹಿಳಾ ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ನಿಯೋಜಿಸುವ ಬಗ್ಗೆಯೂ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಹಳೇ ಜೈಲನ್ನು ಬಹುಪಯೋಗಿ ಪಾರ್ಕ್ ಆಗಿ ನಿರ್ಮಿಸುವ ಸಂಬಂಧ ಗೃಹ ಸಚಿವರಿಗೆ ಮನವರಿಗೆ ಮಾಡಿಕೊಟ್ಟ ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಶಿವಮೊಗ್ಗದಲ್ಲಿ ಕೆಲವು ಸಾರ್ವಜನಿಕ ಹಬ್ಬಗಳು ಈ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದವು. ಈ ಹಿಂದಿನ ಸರ್ಕಾರ ಈ ಕ್ರೀಡಾಂಗಣವನ್ನು ಸಿಂಥಟಿಕ್ ಟ್ರಾಕ್‌ನೊಂದಿಗೆ ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲು ಸೂಕ್ತ ಜಾಗ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೆ ಜೈಲು ಪ್ರದೇಶ ಇಂತಹ ಆಚರಣೆಗಳಿಗೆ ಸೂಕ್ತ ಜಾಗವಾಗಿರುವುದರಿಂದ ಶಿವಮೊಗ್ಗ ನಾಗರಿಕರ ಅನುಕೂಲಕ್ಕಾಗಿ ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ, ಮೇಯರ್ ಖುರ್ಷಿದಾ ಬಾನು, ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಸ್. ಎಲ್ಲಪ್ಪ, ದಾವಣಗೆರೆ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಎಸ್. ಪರಶಿವಮೂರ್ತಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಇದ್ದರು.

No comments:

Post a Comment

Lashkar Police