Thursday, June 12, 2014

Karnataka Home Minister KJ George in Shimoga

ಮಹಿಳೆ- ಮಕ್ಕಳ ರಕ್ಷಣೆಗಾಗಿ ಪ್ರಾಸಿಕ್ಯೂಷನ್ ಬೋರ್ಡ್: ಕೆ.ಜೆ.ಜಾರ್ಜ್
12 ಜೂನ್ 2014 : ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ಸಿಗಬೇಕು ಹಾಗೂ ಅಂತಹ ದೌರ್ಜನ್ಯಗಳ ವಿರುದ್ಧದ ಪ್ರಕರಣಗಳು ತ್ವರಿತವಾಗಿ ತನಿಖೆ ನಡೆಸಲು ಅನುಕೂಲವಾಗಲೆಂದು ಪೊಲೀಸ್ ಇಲಾಖೆಯಲ್ಲಿ ವಿಚಾರಣೆ ಮಂಡಳಿಯೊಂದನ್ನು ( ಪ್ರಾಸಿಕ್ಯೂಷನ್ ಬೋರ್ಡ್) ರಚಿಸುವ ಚಿಂತನೆ ಇದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆ ಸಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯ ಮೆಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅನುಕೂಲವಾಗಿ ಪ್ರಾಸಿಕ್ಯೂಷನ್ ಬೋರ್ಡ್ ರಚಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಈ ವಿಚಾರಣಾ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೂಕ್ತ ತರಬೇತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯಾದ್ಯಂತ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೆ 22 ಜಿಲ್ಲೆಗಳಿಗೆ ಭೇಟಿ ನೀಡಿದ್ದು ಇಲಾಖೆಯನ್ನು ಬಲಪಡಿಸಿ ಜನರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯಾದ್ಯಂತ 35 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಹಣಕಾಸು ಇಲಾಖೆ ಒಪ್ಪಿಗೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲಾಖೆಯಲ್ಲಿ 8500 ಸಿಬ್ಬಂದಿ ನೇಮಕಾತಿ ಆರಂಭವಾಗಿದೆ. 706 ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಸಂಬಂಧಿಸಿದಂತೆ ಅವರಿಗೆ ವಯೋಮಿತಿ ಸಡಿಲಿಕೆ ಪ್ರಸ್ತಾವ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. 11,500 ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪೊಲೀಸರ ಅನುಕೂಲಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಕ್ಯಾಂಟಿನ್‌ಗಳನ್ನು ತೆರೆಯಲಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ಪ್ರಕ್ರಿಯೆ ಇಲಾಖಾಧಿಕಾರಿಗಳ ನೇತೇತ್ವದ ಸಮಿತಿ ಮೂಲಕವೇ ನಡೆಯುತ್ತಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದ ಅವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಶೀಫಾರಸು ಕೂಡ ಸಮಿತಿಯೇ ನೀಡಲಿದ್ದು ಮುಖ್ಯಮಂತ್ರಿಗಳ ವಿವೇಚನೆಯಂತೆ ನಡೆಯಲಿದೆ ಎಂದರು.
ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆದಿದೆ. ಈ ವಿಷಯವಾಗಿ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ. ಇನ್ನೋಂದು ಭಾಗದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವ ದುಷ್ಟರ ನಿಗ್ರಹಕ್ಕೆ ಪೊಲೀಸ್ ಇಲಾಖೆ ಸದಾ ಸಿದ್ಧವಿದೆ ಎಂದೂ ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಸ್.ಪರಶಿವಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ದಯಾಳು ಉಪಸ್ಥಿತರಿದ್ದರು.

No comments:

Post a Comment

RR Nagara Police